ಜಾರ್ಜ್ (ಗ್ರೀಸಿನ)

ಜಾರ್ಜ್ 1 : 1845-1913. ಗ್ರೀಸಿನ ದೊರೆ. ಡೆನ್ಮಾರ್ಕಿನ 9ನೆಯ ಕ್ರಿಶ್ಚನನ ಎರಡನೆಯ ಮಗ. 1845ರಲ್ಲಿ ಕೋಪೆನ್‍ಹೇಗನ್‍ನಲ್ಲಿ ಜನಿಸಿದ. ಗ್ರೀಕ್ ರಾಷ್ಟ್ರೀಯ ಸಭೆ 1862ರಲ್ಲಿ ಗ್ರೀಕ್ ದೊರೆ 1ನೆಯ ಆಟೊನನ್ನು ಸಿಂಹಾಸನದಿಂದ ಇಳಿಸಿ ಇವನನ್ನು ರಾಜನಾಗಿ ಚುನಾಯಿಸಿತು (1863). 1881ರಲ್ಲಿ ತೆಸಲಿಯ ಬಹುಭಾಗ ಮತ್ತು ಎಪಿರಸ್‍ನ ಒಂದು ಬಾಗ ಗ್ರೀಸಿಗೆ ಒಳಪಟ್ಟಿತು. 1896-97ರಲ್ಲಿ ಕ್ರೀಟನರು ಜಾರ್ಜನ ವಿರುದ್ಧ ದಂಗೆ ಎದ್ದರು. ಆದರೆ ಅದು ವಿಫಲವಾಯಿತು. 1911-13ರ ಒಂದನೆಯ ಬಾಲ್ಕನ್ ಯುದ್ಧದಲ್ಲಿ ಇವನು ಪ್ರಮುಖ ಪಾತ್ರ ವಹಿಸಿದ. 1913ರಲ್ಲಿ ಜಾರ್ಜ್ ಕೊಲೆಗೆ ಈಡಾದ.

ಜಾರ್ಜ್ 2 : 1890-1947. ಒಂದನೆಯ ಜಾರ್ಜ್‍ನ ಮೊಮ್ಮಗ. ಒಂದನೆಯ ಕಾನ್‍ಸ್ಟಂಟೈನನ ಮಗ. 1922ರಲ್ಲಿ ದೊರೆಯಾದ. ಮರುವರ್ಷ ನಡೆದ ಮಿಲಿಟರಿ ಕ್ಷಿಪ್ರಾಕ್ರಮಣದಿಂದ ಪದಚ್ಯುತಿ ಹೊಂದಿ ದೇಶಭ್ರಷ್ಟನಾದ. 1935ರಲ್ಲಿ ನಡೆದ ಜನಮತಗಣನೆಯ ಫಲವಾಗಿ ಮತ್ತೆ ದೊರೆಯಾಗಲು ಇವನನ್ನು ಆಹ್ವಾನಿಸಲಾಯಿತು. ಆದರೆ ವಾಸ್ತವವಾಗಿ ಅಧಿಕಾರ ನಡೆಸುತ್ತಿದ್ದವನು ಜನರಲ್ ಜೋನ್ಸ್ ಮೆಡಾಕ್ಸಸ್, ಅವನು ಸರ್ವಾಧಿಕಾರಿಯಾಗಿದ್ದ, 1941ರಲ್ಲಿ ಜರ್ಮನರು ಗ್ರೀಸಿನ ಮೇಲೆ ಆಕ್ರಮಣ ನಡೆಸಿದಾಗ ಜಾರ್ಜ್ ಕ್ರೀಟಿಗೆ ಓಡಿಹೋದ. ದೇಶಭ್ರಷ್ಟ ಸರ್ಕಾರದ ಅಧಿಕಾರಿಯಾಗಿದ್ದ. 1946ರಲ್ಲಿ ಇವನು ಗ್ರೀಸಿಗೆ ಹಿಂದಿರುಗಿದ. ಈತ ಕಾಲವಾದ್ದು 1947ರಲ್ಲಿ.
(ಎಚ್.ವಿ.ಎಸ್.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ